ಉಳುವಿ
	ಉತ್ತರ ಕನ್ನಡ ಜಿಲ್ಲೆಗೆ ಸೇರಿದ ಸುಪ ತಾಲ್ಲೂಕಿನ ದಕ್ಷಿಣಕ್ಕೆ 20 ಮೈಲಿ ದೂರದಲ್ಲಿ ಯಲ್ಲಾಪುರಕ್ಕೆ ಸಮೀಪದಲ್ಲಿರುವ ಒಂದು ಗ್ರಾಮ. ಪುರಾತನ ಸ್ಥಳ ; ದುರ್ಗಮ ಪ್ರದೇಶ. ಅಣಶಿ ಘಟ್ಟದ ಹಾಗೂ ಸುಪದ ಮೇಲಿಂದ ಇಲ್ಲಿಗೆ ಬರಲು ಎರಡು ಅರಣ್ಯ ಮಾರ್ಗಗಳಿವೆ. ಗವಿಮಠ ಎನ್ನುವ ಸ್ಥಳದಲ್ಲಿ ಕೆಲವು ಹಳೆಯ ಗುಹೆಗಳಿವೆ. ಇವು ವೀರಶೈವ ಸಾಧುಗಳವಾಗಿರಬೇಕು. ಒಂದಕ್ಕೆ ಬಸವಣ್ಣನವರ ಸಹೋದರಿ ಎನ್ನಲಾದ ಅಕ್ಕನಾಗಮ್ಮನ ಗವಿ ಎನ್ನುತ್ತಾರೆ. ವಡ್ಕಲದಲ್ಲಿ ಒಂದು ಹಳೆಯ ಕಟ್ಟಡವಿದೆ. ಇದರ ಬದಿಗೆ ಕೆರೆಯಿದ್ದು ಸದಾಕಾಲ ನೀರು ತುಂಬಿರುತ್ತದೆ. ಪೂರ್ವಕ್ಕೆ ಇನ್ನೊಂದು ಕೆರೆಯಿದೆ. ಇದರಲ್ಲಿ ಸದಾಕಾಲ ನೀರಗುಳ್ಳೆಗಳು ಮೇಲಕ್ಕೆ ಬರುತ್ತಿರುತ್ತವೆ. ಯಾತ್ರಿಕರು ಇಲ್ಲಿ ಮೀಯುತ್ತಾರೆ.

	ಉಳುವಿ ಶಬ್ದದ ಅರ್ಥ ನಾನು ಇಲ್ಲಿ ಉಳಿಯುವೆ ಎಂದಾಗುತ್ತದೆ. ಆದರೆ ಇದರ ಇತಿಹಾಸ ಸ್ಪಷ್ಟವಿಲ್ಲ. 12ನೆಯ ಶತಮಾನದಲ್ಲಿ ಕಲ್ಯಾಣದ ಕ್ರಾಂತಿಯಾದ ಮೇಲೆ ವೀರಶೈವರು ಯಲ್ಲಾಪುರ ಮತ್ತು ಗಣೇಶನ ಗುಡಿ ರಸ್ತೆಯಿಂದ ಉಳುವಿಯನ್ನು ಪ್ರವೇಶಿಸಿದರು. ಆಗ ಇದನ್ನು ವೃಶಾಪುರ ಎನ್ನಲಾಗುತ್ತಿತ್ತು. ವಲಸೆ ಬಂದ ಶರಣರ ಮಾರ್ಗದರ್ಶಿಗಳಾಗಿ ಚೆನ್ನಬಸವಣ್ಣ, ಅಕ್ಕನಾಗಮ್ಮ ಮುಂತಾದ ಇನ್ನೂ ಅನೇಕ ಶರಣರೂ ವಚನಕಾರರೂ ಇಲ್ಲಿಗೆ ಬಂದರು. ಇಲ್ಲಿಯೇ ವೀರಶೈವ ಧರ್ಮದ ಭವಿಷ್ಯತ್ತಿನ ಬಗ್ಗೆ ಯೋಜನೆಗಳನ್ನು ರೂಪಿಸಿ ಧರ್ಮಪ್ರಚಾರ ಕೈಕೊಳ್ಳಲಾಯಿತು. ಚೆನ್ನಬಸವಣ್ಣ ಇಲ್ಲಿ ಲಿಂಗೈಕ್ಯನಾದ.

	ಹೈದರಿನಿಗಿಂತ ಪೂರ್ವದಲ್ಲಿ ಈ ಪ್ರದೇಶವನ್ನು ಒಬ್ಬ ಹರಿಜನ ಆಳುತ್ತಿದ್ದ. ವೀರಭದ್ರಹೊಂಡದ ಹತ್ತಿರ ಇರುವ ಆತನ ಮನೆಯನ್ನು ಇಂದೂ ಗುರುತಿಸಬಹುದು. ಹೈದರ್ ಈತನನ್ನು ಗೆದ್ದು ಈ ಪ್ರದೇಶವನ್ನು ತನ್ನ ವಶಕ್ಕೆ ತೆಗೆದುಕೊಂಡ.

	ಟಿಪ್ಪುವಿನ ತರುವಾಯ ಬಾರ್ಡೆ ಬಾಬುರಾವ್ ಎಂಬಾತ ಇಲ್ಲಿ ತುಂಬ ಪ್ರಭಾವ ಬೀರಿದ. ಆತ ಕಟ್ಟಿಸಿದ ಒಂದು ಸಣ್ಣ ಕೋಟೆ ಈಗಲೂ ಅಸ್ತಿತ್ವದಲ್ಲಿದೆ. ಇದೆ ಸಮೀಪದಲ್ಲಿರುವ ಬಾಝೂರ ಕುಣಂಗ ಎಂಬ ಹಳ್ಳಿ ದೊಡ್ಡ ವ್ಯಾಪಾರಕೇಂದ್ರ.
										*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ